Tuesday 6 October 2015

~: ದೇವ- ಭಕ್ತ ಸಂಬಂಧ :~

~: ದೇವ-ಭಕ್ತ ಸಂಬಂಧ :~
The Relationship between Devotee and GOD


ಜಗತ್ತಿನಲ್ಲಿ ಸಾಧಕರು ಅನೇಕ ರೀತಿಯಿಂದ, ಬಗೆಬಗೆಯ ಭಕ್ತಿ ಭಾವನೆಯಿಂದ ಪೂಜಿಸಿದುದುಂಟು. ಶ್ರೀ ರಾಮಕೃಷ್ಣರು ಮಾತೃಭಾವನೆಯಿಂದ ಕಾಳಿಯನ್ನು ಪೂಜಿಸಿದರು. ಅರ್ಜುನನು ಶ್ರೀ ಕೃಷ್ಣನನ್ನು ಗೆಳೆಯನೆಂಬ ಭಾವನೆಯಿಂದ ಗೌರವಿಸಿದನು. ಬಿಜ್ಜ ಮಹಾದೇವಿ ಶಿವನನ್ನು ಮಗನೆಂಬ ಭಾವನೆಯಿಂದ ಪ್ರೀತಿಸಿದಳು.
ಬಸವಣ್ಣನವರು ದೇವನನ್ನು ತಂದೆ-ತಾಯಿ-ಬಂಧು-ಬಳಗ-ಗಂಡ ಇತ್ಯಾದಿ ಭಾವನೆಯಿಂದ ಪೊಜಿಸಿದರು. ತಮಿಳನಾಡಿನ ಶ್ರೀ ವೈಷ್ಣವ ಸಂಪ್ರದಾಯದ ಅಳ್ವರರುಗಳಲ್ಲಿ ಆಂಡಾಳ್ ಅಥವಾ ಗೋದಾದೇವಿ ವೈರಾಗ್ಯಶಾಲಿಯಾಗಿ, ಪತಿಯೆಂಬ ಭಾವನೆಯಿಂದ ಶ್ರೀ ಹರಿಯನ್ನು ಪೊಜಿಸಿದಳು. ರಜಪುತಾನದ ಮೇವಾಡ ಸಂಸ್ಥಾನದ ಮೀರಾಬಾಯಿ ಗಂಡನೆಂಬ ಭಾವನೆಯಿಂದ ಗೋಪಾಲ ಕೃಷ್ಣನನ್ನು ಆರಾಧಿಸಿದಳು.
ಅದರಂತೆ ಅಕ್ಕಮಹಾದೇವಿಯೂ ಸಹ ದೇವನನ್ನು ಶರಣಸತಿ-ಲಿಂಗಪತಿ ಭಾವದಿಂದ ಪೂಜಿಸಿದಳು. ಇದರಂತೆ ಪಾಶ್ಚಾತ್ಯರಲ್ಲಿಯೂ ಅನೇಕ ಶಾಸಕರು ದೇವನನ್ನು ಸತಿ-ಪತಿ ಭಾವದಿಂದ ಪೂಜಿಸಿದುದು ನಮಗೆ ತಿಳಿದು ಬರುತ್ತದೆ. ಉಳಿದವರಿಗೂ ಅಕ್ಕನಿಗೂ ಸ್ವಲ್ಪ ಭೇದವಿದೆ. ದೇವನನ್ನು ಗಂಡನೆಂಬ ಭಾವನೆಯಿಂದ ಪೂಜಿಸಲು ತಮ್ಮ ಮುಂದೆ ಇಟ್ಟುಕೊಂಡು ಉಪಾಸ್ಯ ವಸ್ತುಗಳು. ಅನೇಕರ ಜೀವನದಲ್ಲಿ ಅವರಿಗೆ ಪೂಜ್ಯವೆನಿಸಿದ ವ್ಯಕ್ತಿಯ ವಿಗ್ರಹಗಳೆಂಬುದನ್ನು ಮರೆಯಲಾಗದು. ಆದರೆ ದೇವನನ್ನು ಗಂಡನೆಂಬ ಭಾವನೆಯಿಂದ ತಿಳಿದು ಅಕ್ಕ ತನ್ನ ಮುಂದೆ ಇಟ್ಟುಕೊಂಡ ಉಪಾಧ್ಯಾಯ ವಸ್ತುವು ಯಾವ ವ್ಯಕ್ತಿಯ ವಿಗ್ರಹವೂ ಆಗಿರದೆ, ಅವ್ಯಕ್ತ ಪರಮ ನಿರಂಜನದ ಕುರುಹಾದ ಇಷ್ಟಲಿಂಗವಾಗಿತ್ತೆಂಬುದನ್ನು ಗಮನಿಸಬೇಕು.
~: ಸದ್ಗುರು ಸ್ವಾಮಿ ಲಿಂಗಾನಂದರು :~

No comments:

Post a Comment